ಪ್ರಾಚೀನ ಭಾರತದಲ್ಲಿ ಸುರೂಪಿಕಾ ಶಸ್ತ್ರಚಿಕಿತ್ಸೆ

    ಸುಮಾರು 2500 ವರ್ಷಗಳಷ್ಟು ಹಿಂದೆಯೇ ಸುಂದರ ರೂಪಕ್ಕಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು.  ಸುಮಾರು ಕ್ರಿ.ಪೂ. 600-500 ವರ್ಷಗಳ ಸಮಯದಲ್ಲಿ ಭಾರತದಲ್ಲಿ ಆಚಾರ್ಯ ಸುಶ್ರುತ ವಿಕಾರಗೊಂಡವರ ಮೂಗನ್ನು ಶಸ್ತ್ರಚಿಕಿತ್ಸೆಯಿಂದ ಸರಿಪಡಿಸುವುದರಲ್ಲಿ ಸಿದ್ಧಹಸ್ತನಾಗಿದ್ದ.  ಶಸ್ತ್ರಚಿಕಿತ್ಸೆ ವಿಧಾನಗಳು ಹೆಚ್ಚು ಮುಂದುವರೆಯದಿದ್ದ ಪ್ರಾಚೀನ ಕಾಲದಲ್ಲಿ "ನಾಸಿಕ ಸುರೂಪಿಕಾ ಶಸ್ತ್ರ ಚಿಕಿತ್ಸೆ" (ಕ್ಹ್ಯಿನೊಪ್ಲಾಸ್ಟಿ)ಯನ್ನು ಮಾಡುತ್ತಿದ್ದ.  ಆಧುನಿಕ ಸುರೂಪಿಕಾ ಶಸ್ತ್ರಚಿಕಿತ್ಸಕರು ಅವನು ಮಾಡುತ್ತಿದ್ದ ರೀತಿಯಲ್ಲಿಯೇ ಕ್ಹ್ಯಿನೊಪ್ಲಾಸ್ಟಿಯನ್ನು ಈಗಲೂ ಮಾಡುತ್ತಿದ್ದಾರೆಂದರೆ ಸುಶ್ರೂತನ ಶಸ್ತ್ರಚಿಕಿತ್ಸಾ ಕೌಶಲ್ಯದ ಅರಿವಾಗಬಹುದು. ಹಣೆಯ ಭಾಗದಿಂದ ಮೂಗಿನ ವಿರೂಪವನ್ನು ಮುಚ್ಚುವುದಕ್ಕೆ ಅಗತ್ಯವಿರುವಷ್ಟು ಧರ್ಮ ಮತ್ತು ಅಂಗಾಂಶಗಳನ್ನು ಕತ್ತರಿಸಿ ಮೇಲೆತ್ತಿ (ಅದರ ಬುಡ ಹಣೆಗೇ ಅಂಟಿಕೊಂಡಿರುವ ಹಾಗೆ ಬಿಟ್ಟಿದ್ದು) ಮೂಗಿನ ಭಾಗಕ್ಕೆ ಸ್ಥಳಾಂತರಿಸಿ, ವಿಕಾರ ಮುಚ್ಚುವಂತೆ ಹೊಲಿಗೆ ಹಾಕುತ್ತಿದ್ದನಂತೆ.
    ಪ್ಲಾಸ್ಟಿಕ್ ಎಂಬುದಕ್ಕೆ "ಸುಲಭವಾಗಿ ಆಕಾರ ಮಾಡಬಹುದಾದ" ಎಂಬರ್ಥವಿದೆ ಅದರಂತೆ "ಸುಂದರ ಆಕಾರವನ್ನುಂಟು ಮಾಡುವ ಶಸ್ತ್ರಚಿಕಿತ್ಸೆಗೆ "ಪ್ಲಾಸ್ಟಿಕ್ ಸರ್ಜರಿ" ಅಥವಾ ಸುರೂಪಿಕಾ ಶಸ್ತ್ರಚಿಕಿತ್ಸೆ ಎಂಬುದು ಅನ್ವರ್ಥ ನಾಮವಾಯಿತು.  ಭಾರತದಲ್ಲಿ ಜನಿಸಿದ ಈ ಚಿಕಿತ್ಸಾ ವಿಧಾನ ಅರೇಬಿಯಾ ದೇಶಗಳ ಮೂಲಕ ಪಾಶ್ವಾತ್ಯ ರಾಷ್ಟ್ರಗಳಿಗೆ ಪ್ರಯಾಣ ಮಾಡಿದ್ದಕ್ಕೆ ಉಲ್ಲೇಖವಿದೆ.  ಮೊದಲ ಮಹಾಯುದ್ಧದ ಸಮಯದಲ್ಲಿ ಗಾಯಗಳಿಂದ ಮಾಡಿಕೊಂಡ ಸೈನಿಕರಿಗೆ ನೆರವಾಗುವಲ್ಲಿ ಪ್ಲಾಸ್ಟಿಕ್ ಸರ್ಜರಿಯ ವಿಧಾನಗಳು ಮೊತ್ತಮೊದಲು ವ್ಯಾಪಕವಾಗಿ ಆಚರಣೆಗೆ ಬಂದವು.  ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡು ವಿಕಾರವಾದವರನ್ನು ಸುರೂಪಗೊಳಿಸಲು ಈ ವಿಧಾನದಲ್ಲಿ ವಿಶೇಷ ತಜ್ಞವೈದ್ಯರ ತಂಡಗಳೇ ತಯಾರಾದವು.  ದೇಹದ ಮೇಲಿನ ಸುಟ್ಟಗಾಯಗಳು ಸಹಜ ರೀತಿಯಲ್ಲಿ ವಾಸಿಯಾಗುವುದು ದುಸ್ತರ ಮತ್ತು ವಾಸಿಯಾದರೂ ವಿರೂಪಗೊಳ್ಳುತ್ತದೆ.  ಅವು ಬೇಗನೇ ವಾಸಿಯಾಗಲು ಅದೇ ವ್ಯಕ್ತಿಯ ದೇಹದ ಇನ್ನೊಂದು ಭಾಗದಿಂದ ತೆಳುವಾದ ಚರ್ಮದ ಹಾಳೆಗಳನ್ನು ಬೇರ್ಪಡಿಸಿ ಗಾಯವಿರುವೆಡೆಯಲ್ಲಿ ಹೊದಿಸುವ ಚರ್ಮದ ಕಸಿ (ಸ್ಕಿನ್ ಗ್ರಾಫ್ಟಿಂಗ್) ಸರಳರೀತಿಯ ಪ್ಲಾಸ್ಟಿಕ್ ಸರ್ಜರಿಗೆ ಒಂದು ಉತ್ತಮ ಉದಾಹರಣೆ.  ಸುಮಾರು 150 ವರ್ಷಗಳಿಂದ ಇದು ವ್ಯಾಪಕವಾಗಿ ಆಚರಣೆಗೆ ಬಂದಿದೆ.
    ಮಕ್ಕಳಲ್ಲಿ ಹುಟ್ಟಿನಿಂದಲೇ ಬಂದ ನ್ಯೂನತೆಗಳಾದ ಸೀಳು ತುಟಿ, ಸೀಳು ಅಂಗಗಳ ದುರಸ್ತಿಯನ್ನು ಪ್ಲಾಸ್ಟಿಕ್ ಸರ್ಜರಿಯಿಂದ ಅತ್ಯಂತ ಯಶಸ್ವಿಯಾಗಿ ಮಾಡಲಾಗುತ್ತಿದೆ.  ಕ್ಯಾನ್ಸರ್, ಕುಷ್ಠರೋಗ ಮುಂತಾದವುಗಳ ಪರಿಣಾಮದಿಂದ ವಿಕಾರವಾದ ಕೈಕಾಲು, ಮುಖದ ಭಾಗಗಳ ದುರಸ್ತಿಗೂ ಪ್ಲಾಸ್ಟಿಕ್ ಸರ್ಜರಿ ಬಳಕೆಯಾಗುತ್ತಿದೆ.  ಇತ್ತೀಚಿನ ವರ್ಷಗಳಲ್ಲಿ ಮುಖ, ಮೂಗು, ತುಟಿ, ಸ್ತನಗಳ ಆಕಾರ, ಗಾತ್ರ ಲಕ್ಷಣವಾಗಿಲ್ಲದವರಿಗೆ ಪ್ಲಾಸ್ಟಿಕ್ ಸರ್ಜರಿ ವರಪ್ರಸಾದವಾಗಿದೆ.			(ಡಾ. ವಸುಂಧರಾ ಭೂಪತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ